ಬಾಲಸರಸ್ವತಿ 1 - 1880-1938 : ಕನ್ನಡದಲ್ಲಿ ಸ್ವತಂತ್ರ ಪತ್ತೇದಾರಿ ಕಾದಂಬರಿಗಳನ್ನು ಬರೆದ ಮೊದಲಿಗರಲ್ಲೊಬ್ಬರು. ನರಹರಿಶರ್ಮಾ ಎಂಬುದು ಇವರ ನಿಜನಾಮ. ಬಾಲಸರಸ್ವತಿ ಕಾವ್ಯನಾಮ. ಮೈಸೂರಿನವರಾದ ಇವರು ವ್ಯಾಕರಣ ಪಂಡಿತ ಅಣ್ಣಾಚಾರ್ಯರಲ್ಲಿ ಸಂಸ್ಕøತ ಕಲಿತು ಮಹಾರಾಜ ಕಾಲೇಜಿನಲ್ಲಿ ಓದಿ ಎಫ್. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಚಿತ್ರಕಲೆಯಲ್ಲಿ ಆಸಕ್ತಿವಹಿಸಿ ರಾಜ ರವಿವರ್ಮರ ಬಳಿ ವ್ಯಾಸಂಗಮಾಡಿ ನೈಪುಣ್ಯಗಳಿಸಿ ಮೈಸೂರಿನ ಪ್ರೌಢಶಾಲೆಯೊಂದರಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಸ್ವಲ್ಪಕಾಲ ಕೆಲಸ ಮಾಡಿದರು. ಸ್ವತಂತ್ರ ಪ್ರವೃತ್ತಿಯವರು. ಬೆಂಗಳೂರಿನಲ್ಲಿ ಒಂದು ಮುದ್ರಣಾಲಯ ಸ್ಥಾಪಿಸಿ ಚಿತ್ರಗುಪ್ತನ ದಫ್ತರ್ ತರಂಗಿಣೀ ಗ್ರಂಥಮಾಲೆ, ಬಾಲಕಥಾವಳಿ ಗ್ರಂಥಮಾಲೆ, ಬೋಧಾವಳಿಗ್ರಂಥಮಾಲೆ ಮುಂತಾದ ಗ್ರಂಥಮಾಲೆಗಳನ್ನು ಸ್ವಲ್ಪಕಾಲ ನಡೆಸಿದರು. ಈ ಉದ್ಯಮವನ್ನು ಮಧ್ಯೆ ಬಿಟ್ಟ ಇವರು ಮೈಸೂರಿನ ಅರಸು ಗಲ್ರ್ಸ್ ಹೈಸ್ಕೂಲು, ಅರಸು ಬೋರ್ಡಿಂಗ್ ಸ್ಕೂಲು ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕøತ-ಕನ್ನಡ ಶಿಕ್ಷಕರಾಗಿ ಕೆಲಸ ಮಾಡಿದರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯ ಸ್ಥಾಪನೆಗಾಗಿಯೂ ಶ್ರಮಿಸಿದರು.

ಕನ್ನಡ ಸಂಸ್ಕøತ ಇಂಗ್ಲಿಷ್ ಮತ್ತು ಬಂಗಾಳೀ ಭಾಷೆಗಳಲ್ಲಿ ಒಳ್ಳೆಯ ಪರಿಶ್ರಮ ಹೊಂದಿದ್ದ ಇವರು ಬಂಗಾಳಿ ಭಾಷೆಯಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸ್ವತಂತ್ರವಾಗಿ ಅನೇಕ ಪತ್ತೇದಾರಿ ಕಾದಂಬರಿಗಳನ್ನು ಬರೆದಿದ್ದಾರೆ. ಅದೃಷ್ಟ ಬೇಕೇ ಅದೃಷ್ಟ, ಕನ್ಯಾಕುಮಾರಿ, ಕಮಲಾಕಾಂತನ ಉಯಿಲು, ಕರ್ಮ ಸನ್ಯಾಸಿ, ಕಾಮಧೇನು, ಕುಮುದಿನಿ, ಗುರುತು ಕಂಡ ಕಳ್ಳ, ಚೋರ ಚಕ್ರವರ್ತಿ, ತ್ರಿಪುರಸುಂದರಿ-ಇವು ಇವರ ಕೆಲವು ಕಾದಂಬರಿಗಳು, ನೀತಿಪ್ರತಿಪಾದನೆ ಹಾಗೂ ಅದ್ಭುತರಮ್ಯ ವಾತಾವರಣ ನಿರ್ಮಾಣ, ಹಗಲು-ಕತ್ತಲೆ, ಸ್ಪಷ್ಟ ವಿರೋಧವುಳ್ಳ ನಾಯಕ-ಖಳನಾಯಕರ ಕಲ್ಪನೆ; ಐತಿಹಾಸಿಕ, ಸಾಮಾಜಿಕ ಸಾಮಾಗ್ರಿಗಳ ಸಂಯೋಜನೆ-ಇವು ಇವರ ಕಾದಂಬರಿಗಳ ವೈಶಿಷ್ಟ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ